ಫರ್ಮರ್, ಲೂಯಿಸ್ ಲೇ
	 1880-1954 ಜನನ ಲಂಡನ್ 18 ಸೆಪ್ಟೆಂಬರ್ 1880. ಮರಣ ಇಂಗ್ಲೆಂಡ್ 20 ಮೇ 1954. ಭಾರತದ ಭೂವೈಜ್ಞಾನಿಕ ಸರ್ವೇಕ್ಷಣ ಇಲಾಖೆಯ ನಿರ್ದೇಶಕರಾಗಿ (1932-35) ಮೌಲ್ಯಯುತ ಕೊಡುಗೆಗಳನ್ನು ನೀಡಿದ ಭೂವಿಜ್ಞಾನಿ. ಭಾರತದ ಮ್ಯಾಂಗನೀಸ್ ಅದುರು ನಿಕ್ಷೇಪಗಳಿಗೂ ಆರ್ಕೇಯನ್ ಗುಂಪಿನ ಶಿಲೆಗಳಿಗೂ ಇರುವ ಸಂಬಂಧವನ್ನು ಕಂಡು ವಿವರಿಸಿದ್ದು ಇವರ ಹಿರಿಮೆ. ಭೂಗರ್ಭದಲ್ಲಿ ಅತ್ಯಧಿಕ ಉಷ್ಣವಿರುವ ಇನ್ಫ್ರಾಪ್ಲೂಟೋನಿಕ್ ವಲಯದ ಬಗ್ಗೆ ಇವರು ಮಂಡಿಸಿದ ವಾದ ಪಂಡಿತರ ಮನ್ನಣೆಗಳಿಸಿತು. ಇದರ ಪರಿಣಾಮವಾಗಿ ಭೂಮಿಯ ಆಂತರಿಕ ರಚನೆ ಕುರಿತಂತೆ ಹೆಚ್ಚಿನ ತಿಳಿವಳಿಕೆ ಲಭಿಸಿತು. ಕಬ್ಬಿಣ ಮತ್ತು ಮ್ಯಾಂಗನೀಸ್ ಅದುರುಗಳ ಅನ್ವೇಷಣೆಯಲ್ಲಿ ಕಾಂತೀಯ ಮುಳ್ಳನ್ನು ಇವರೇ ಪ್ರಥಮ ಬಳಸಿದವರು. ಮಧ್ಯಪ್ರಾಂತ್ಯಗಳ ಮ್ಯಾಂಗನೀಸ್ ಅದುರು ನಿಕ್ಷೇಪವಿರುವ ಪ್ರದೇಶಗಳಲ್ಲಿ ಅದರ ರಚನಾ ಸಂಬಂಧದ ಬಗೆಗೆ ಕೈಗೊಂಡ ಅಧ್ಯಯನದಿಂದ, ಈ ಅದುರು ನಿಕ್ಷೇಪಗಳ ಸ್ವರೂಪ, ಹಾಗೂ ಅವು ಭೂಮಿಯ ಕೆಳಗೆ ಎಷ್ಟು ಆಳದಲ್ಲಿ ದೊರೆಯುವುವು ಎಂಬವುಗಳ ಮೇಲೆ ಬೆಳಕು ಚೆಲ್ಲಲು ಸಾಧ್ಯವಾಯಿತು. ಭಾರತದ ಕೆಲವು ಡ್ಯೂರೈನುಗಳ (ಮಂಕಾಗಿ ಕಾಣುವ ಒಂದು ಬಗೆಯ ಕಲ್ಲಿದ್ದಲು ಮಾದರಿ) ಸಾಪೇಕ್ಷ ಸಾಂದ್ರತೆ ಹಾಗೂ ಅದರ ಸಂಯೋಜನೆಗಳ ಮೇಲೆ ಇವರು ನಡೆಸಿದ ಸಂಶೋಧನೆಗಳು, ಕಲ್ಲಿದ್ದಲಿನ ಮೇಲೆ ನಡೆಸಲಾದ ಆಧುನಿಕ ಸಂಶೋಧನೆಗಳಿಗೆ ಒಂದು ಪ್ರಮುಖ ಕೊಡುಗೆಯೆಂಬುದಾಗಿ ಪರಿಗಣಿಸಲಾಗಿದೆ.

	ನಾಗಪುರ, ಭಂಡಾರ ಮತ್ತು ಚಿಂದ್ವಾರ ಜಿಲ್ಲೆಗಳ ಆರ್ಕೇಯನ್ ಶಿಲೆಗಳ ಮೇಲೆ ಅನೇಕ ವರ್ಷಗಳ ತನಕ ವ್ಯಾಪಕ ಅಧ್ಯಯನ ನಡೆಸಿದ ತರುವಾಯ ಫರ್ಮರ್ ವಿವರವಾದ ಒಂದು ನಕ್ಷೆ ತಯಾರಿಸಿದರು. ಅತಿಯಾಗಿ ರೂಪಾಂತರಗೊಂಡ ಸುಣ್ಣಕಲ್ಲು ಅಥವಾ ಜೇಡಿಮಣ್ಣಿನಿಂದ ಕೂಡಿದ ಮಡ್ಡಿಗಳು (ಸ್ತರಗಳು) ಮತ್ತು ಅವುಗಳ ಜತೆಗೂಡಿರುವ ಅಂತಸ್ಸರಣ ಆಗ್ನಿಶಿಲೆಗಳನ್ನು ಸಾಸರ್ ಶ್ರೇಣಿಗಳೆಂಬ ಹೆಸರಿನಿಂದ ಕರೆದು ತಮ್ಮ ನಕ್ಷೆಯಲ್ಲೇ ಈ ಕ್ಲಿಷ್ಟವಾದ ವಿವರಗಳನ್ನೆಲ್ಲ ಅಳವಡಿಸಿದರು.

	ಇಲಾಖೆಯಲ್ಲಿ ಸುಮಾರು 33 ವರ್ಷಗಳಷ್ಟು ದೀರ್ಘಕಾಲದ ಅಮೋಘ ಸೇವೆಯ ತರುವಾಯ ಫರ್ಮರ್ 1935ರಲ್ಲಿ ಸೇವೆಯಿಂದ ನಿವೃತ್ತರಾದರು. ಆರ್ಕೇಯನ್ ಶಿಲಾಸ್ತೋಮದ ಸಮದೂಗುವಿಕೆಯ ಮೇಲೆ ಇವರು ಸೇವೆಯಲ್ಲಿದ್ದಾಗ ಹಾಗೂ ನಿವೃತ್ತರಾದ ಬಳಿಕ ಬರೆದ ಅನೇಕ ಲೇಖನಗಳು ಮತ್ತು ಹೊರತಂದ ಪ್ರಕಟಣೆಗಳು ಅಮೂಲ್ಯ ದಾಖಲೆಗಳು. ಇಂಗ್ಲೆಂಡಿನ ರಾಯಲ್ ಸೊಸೈಟ ಫರ್ಮರ್ ಅವರನ್ನು 1934ರಲ್ಲಿ ತನ್ನ ಫೆಲೋ ಆಗಿ ಆಯ್ದು ಗೌರವಿಸಿತು. ಇವರು ಭಾರತದಲ್ಲಿ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸಸ್ ಎಂಬ ಸಂಸ್ಥೆಯ ಸ್ಥಾಪನೆಗೆ ಸ್ಫೂರ್ತಿಯ ಸೆಲೆಯಾಗಿದ್ದರಲ್ಲದೆ 1935ರಲ್ಲಿ ಅದರ ಪ್ರಥಮ ಅಧ್ಯಕ್ಷರೂ ಆಗಿದ್ದರು.				    
(ಎಂ.ಎಸ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ